ಹೆಜ್ಜೆಗಳು – ಕ್ರೀಡಾಕೂಟ

ತಾಲೂಕು ಮಟ್ಟದ ವ್ಹಾಲಿಬಾಲ್  ಕ್ರೀಡಾಕೂಟ ಗಳನ್ನು ಜಹಗೀರ ಗುಡದುರನಲ್ಲಿ ನಡೆಸಲಾಯಿತು. ಅಧ್ಯಕ್ಷತೆಯನ್ನು ಶ್ರೀ ಮುತ್ತಣ್ಣ ವಾಲಿಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರು ವಹಿಸಿಕೊಂಡಿದ್ದರು. ಉಧ್ಘಾಟನೆಯನ್ನು  ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಶಾಲಾ ಭೂ ದಾನಿಗಳಾದ ಶ್ರೀ ಭೀಮರಾವ್ ಸಾಲುಂಕಿಯವರು ನಡೆಸಿಕೊಟ್ಟರು. ಕ್ರೀಡಾ ಧ್ವಜಾರೋಹಣವನ್ನು ಶ್ರೀ ದಾದ್ಮಿಯರವರು  ನಡೆಸಿಕೊಟ್ಟರು. ೫ ವಲಯಗಳು ಶಾಂತಿಯುತವಾಗಿ ಕ್ರೀಡಾ ಕೂಟಗಳನ್ನು ನಡೆಸಲಾಯಿತು.

ಸ್ವಾತಂತ್ರ್ಯ ದಿನಾಚರಣೆಯ ನಮ್ಮಹೆಜ್ಜೆಗಳು

ImageImageImageImageImageImage

ನಾಟಕ

ನಾಟಕದ ಮರುದಿನ ಕಿವಿಯಲ್ಲಿ ತುಸು ಬಣ್ಣ

ಇರುತ್ತದೆ ಕಣ್ಣಲ್ಲಿ ನಿದ್ದೆ.

ಒದ್ದೆ ಕನಸುಗಳೆಲ್ಲ ಹಗಲಿಗೆ ವರ್ಗಾಯಿಸಲ್ಪಟ್ಟು

ಸೂರ್ಯಾಸ್ತಕ್ಕೆ ಕೆಲವೇ ಕ್ಷಣ ಮುನ್ನ

ಸೂರ್ಯೋದಯದ ರೋಮಾಂಚ. ಎಲ್ಲೋ

ಕಟ್ಟಿದ ಮೋಡಕ್ಕೆ ಇಲ್ಲಿ ಮಬ್ಬು ಮಳೆ ಇಬ್ಬನಿ

ಹೀಗೆ ಹವಮಾನ ಕೈಯಾಚೆ ನಡೆದು ಜಗತ್ತು

ಮುಂದುವರೆಯುತ್ತದೆ ಅಥವಾ ಹಿಂದೆ ಬೀಳುತ್ತದೆ.

ನಾಟಕದ ನಂತರವೇ ಇವೆಲ್ಲ.

ಪ್ರೇಮದ ನಂತರ ಅನ್ನುವ ಹಾಗಿಲ್ಲ

ಹುಟ್ಟಿನ ನಂತರ ಅನ್ನುವ ಹಾಗಿಲ್ಲ. ನಾಟಕದ

ನಂತರ ಅನ್ನಬಹುದು- ಏಕೆಂದರೆ ನಾಟಕ

ಮರುದಿನ ಕಿವಿಯಲ್ಲಿ ತುಸು ಬಣ್ಣ ಇದ್ದದ್ದೆ.

ಕಣ್ಣಲ್ಲಿ ನಿದ್ದೆ.

 

ಹಾಗೆ ನೋಡಿದರೆ ನಾಟಕದ ಮೊದಲು

ಏನಿತ್ತು? ಇದು ತೋಟದ ಮೊದಲು ಏನಿತ್ತು

ಅಂದ ಹಾಗಲ್ಲ. ಅಥವಾ ಸಂಭೋಗದ ಮೊದಲು

ಏನಿತ್ತು ಅಂದ ಹಾಗಲ್ಲ. ಇದು ಸೂರ್ಯೋದಯದ

ಮೊದಲು ಏನಿತ್ತು ಅನ್ನಲು ಹೋಗಿ ಬೆಳಕಿಗೆ

ಅವಾಕ್ಕಾದಂತೆ ಕಿರಣಗಳನ್ನು ನೀರಲ್ಲಿ ಹಿಡಿಯ

ಹೋಗಿ ಮೀನಿಗೆ ಮರಳಾದಂತೆ.

ವಿನಾಕಾರಣ ಅಂಗೈ ಮೇಲಿನ ಗಾಯ

ಮಾಯತೊಡಗಿದಂತೆ. ಏಕೆಂದರೆ ನಾಟಕದ ಮೊದಲು

ನಾಟಕವೇ ಇರಲಿಲ್ಲ. ಬೆಟ್ಟ ಇತ್ತು ನೀರಿತ್ತು ಮೀನಿತ್ತು

ನಾಟಕವೇ ಇರಲಿಲ್ಲ. ಗಾಯವಿತ್ತು ಮಣ್ಣಿತ್ತು ಕಣ್ಣಿತ್ತು

ನಾಟಕವೇ ಇರಲಿಲ್ಲ.

 

– ಜಯಂತ ಕಾಯ್ಕಿಣಿ.

ದಶಮಾನೋತ್ಸವದ ತಯಾರಿ

”  ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ “
ಎಂಬ ಮಾತಿಗೆ ಪುಷ್ಟಿ ನೀಡುತ್ತಿರುವ ಈ ಸರಕಾರಿ ಪ್ರೌಢ ಶಾಲೆ ,
 ಜಹಗೀರ ಗುಡದೂರ. ಶಾಲೆಯು ಈಗ ಕೇವಲ ಹತ್ತು ವರ್ಷದ ಕೂಸು ಇದ್ದಂತೆ. ಆದಾಗ್ಯೂ ಗ್ರಾಮಸ್ಥರ,
 ಎಸ್.ಡಿ.ಎಮ್.ಸಿ. ಯವರ ಮುಖ್ಯಗುರುಗಳ ಹಾಗೂ ಶಿಕ್ಷಕ ಮಿತ್ರರ ಸತತ ಪರಿಶ್ರಮದಿಂದ
ಒಂದು ಪವಿತ್ರ ಶೈಕ್ಷಣಿಕ ಪುಣ್ಯ ಕ್ಷೇತ್ರವಾಗಿ ಬೆಳೆದು ನಿಂತ ಜ್ಞಾನ ದೇವಾಲಯ ಇದಾಗಿದೆ.
ಇನ್ನೂ ಎತ್ತರೋತ್ತರವಾಗಿ ಬೆಳೆಯಲಿ, ಜ್ಞಾನ ದೀಪ ಬೆಳಗಲಿ ಎಂದು ಹಾರೈಸುವೆ.
ಬಸವರಾಜ ಬಾಗಲಿ 
ಶಿಕ್ಷಣ ಸಂಯೋಜಕರು,
ಹನಮನಾಳ ವಲಯ ತಾ। ಕುಷ್ಟಗಿ. 

ಬದಿಗೆ

ಶಾಲಾ ದಶಮಾನೋತ್ಸವ ತಯಾರಿ

ಶಾಲಾ ದಶಮಾನೋತ್ಸವ ತಯಾರಿ

ಶಾಲಾ ದಶಮಾನೋತ್ಸವ ತಯಾರಿಗಾಗಿ ಮಕ್ಕಳು ಮಣ್ಣಿನ ಮಾದರಿಗಳನ್ನು ಸಿದ್ದತೆ ಮಾಡುತ್ತಿರುವುದು. ಶಾಲಾ ಆವರಣದಲ್ಲಿಯೇ ಸಿಗುವ ಕಲ್ಲು ಮಣ್ಣುಗಳಿಂದ ಮಕ್ಕಳು ಮೂರ್ತಿಗಳನ್ನು ಮುಖವಾಡಗಳನ್ನು ತಯಾರಿ ನಡೆಸಲಾಗುತ್ತಿದೆ. ಮೂರ್ತಿಗಳು ಮಕ್ಕಳ ಸೃಜನಶೀಲ ಕಾರ್ಯಗಳನ್ನು ಹೊರಹೊಮ್ಮುವುದನ್ನು ನಾವು ಇಲ್ಲಿ ಕಾಣುತ್ತಾ ತಮ್ಮ ಪೂರ್ವಿಕರ ಸ್ವಾಗತವನ್ನು ಆಲಂಕರಿಕವಾಗಿ ನಡೆಸಲು ತುದಿಯುವುದನ್ನು ನಾವು ಇಲ್ಲಿ ಕಾಣಬಹುದು.

ಚಿತ್ರ

ನಾಟಕ ಪರಂಪರೆ

ನಾಟಕದ ಬಗ್ಗೆ ಎಲ್ಲರೂ ಮಾತಾಡಲು ಸುರುಮಾಡುತ್ತಾರೆ, ಕೆಲವರು ಹಾಗಿರಬೇಕಿತ್ತು ಹೀಗಿರಬೇಕಿತ್ತು ಎಂಬಿತ್ಯಾದಿ ಆಶಾವಾದದ ಉಚಿತ ಸಲಹೆಗಳನ್ನು ಕೊಡಲು ಪ್ರಾರಂಭಿಸುತ್ತಾರೆ. ನಾಟಕದ ತಳಹದಿ ಯಾವ ರೂಪದಲ್ಲೇ ಇರಲಿ ತಮ್ಮ ತಲೆಯೊಳಗಿನ ಚಿತ್ರದ ಗಡಿ ದಾಟಿಕೊಂಡು ನಾಟಕ ನೋಡುವುದೇ ಇಲ್ಲ. ಹಾಗೆ ಮಾತಾಡುವವರು ಚಿತ್ರಗಳ ಬಗ್ಗೆ ಮಾತಾಡುವುದಿಲ್ಲ, ಕವಿತೆಗಳ ಬಗ್ಗೆ ಮಾತಾಡುವುದಿಲ್ಲ ಶಿಲ್ಪಗಳ ಕುರಿತಾಗಿ ಮಾತಾಡುವುದಿಲ್ಲ..! ಆಶ್ಚರ್ಯವೆಂದರೆ ನಾಟ್ಯಭಂಗಿಗಳ ಬಗ್ಗೆ ಸಹಿತ ವಿವೇಚನೆ ಮಾಡುವುದಿಲ್ಲ. ಸಾಧಾರಣವಾಗಿ ನಾಟಕ ನೋಡಿದ ಮೇಲೆ ಒಂದು ಸಣ್ಣ ಚರ್ಚೆ ಇಟ್ಟಾಗ ಪ್ರೇಕ್ಷಕರಲ್ಲಿ ಕೆಲವು ಗೊಂದಲಗಳು ಏಳುತ್ತವೆ. ಅದ್ಯಾವದೋ ನೆನಪಿನ ಸುರುಳಿಯಲ್ಲಿ ಇಡೀ ನಾಟಕ ಗ್ರಹಿಸಿರುತ್ತಾರಾದ್ದರಿಂದ ಅದೇ ತೆರನಾದ ಭಾವಪ್ರಪಂಚದ ಒಳಹೊಗಲು ಪ್ರಯತ್ನಿಸುತ್ತಿರುತ್ತಾರೆ. ಒಮ್ಮೆ ರಸವತ್ತಾಗಿ ಅಭಿನಯಿಸಲ್ಪಟ್ಟ ನಾಟಕವೊಂದು ಮತ್ತೊಮ್ಮೆ ಅಷ್ಟೆ ರಸವತ್ತಾಗಿ ತಟ್ಟಬೇಕಾದ್ದು ಏನೂ ಇರುವುದಿಲ್ಲ. ಅದು ಸಂಪೂರ್ಣ ನಟ/ನಟಿಯ ಅಭಿವ್ಯಕ್ತಿಯಾಗಿ ರೂಪಗೊಳ್ಳುವುದು ಭಾವತುಂಬಿ ಅಬಿನಯಿಸಿದಾಗ ಮಾತ್ರ… ಆದರೆ ನಾವು ದಿನನಿತ್ಯದ ಬದುಕಿನಲ್ಲಿ ಅಂಥ ಭಾವಪೂರ್ಣವಾದ ಕ್ಷಣಗಳನ್ನ ಕಂಡಿದ್ದ ಕಾರಣಕ್ಕಾಗಿ ನಾಟಕ ನೋಡುಗನೊಂದಿಗೆ ಸಹ ಪ್ರಯಾಣ ಆರಂಭಿಸಿಬಿಟ್ಟಿರುತ್ತದೆ. ಅಷ್ಟು ಸಹಜವಾಗಿ ನಮ್ಮ ಒಳ-ಹೊರಗೇಕಾಗಿ ನಾಟಕದ ಎರಡು ಸಂವಹನಗಳು ಸಾಧ್ಯವಾಗುತ್ತಿರುತ್ತವೆ. ಅಂಥ ಸಂವಾದ ಬೇರೆ ಯಾವ ಮಾಧ್ಯಮದಿಂದ ಸಾಧ್ಯವಾಗಲಾರದು ಎಂದು ಹೇಳಲಾಗದು ಯಾಕಂದ್ರೆ ಆ ಎಲ್ಲ ಕಲಾಪ್ರಕಾರಗಳು ತನ್ನ ಅರಿವಿನ ವಿಸ್ತಾರದಲ್ಲಿ ಕೊಡುಕೊಳ್ಳುವ ಒಂದು ವ್ಯಾಪಾರ ಮನೋಧರ್ಮವನ್ನು ಬೆಳೆಸಿಕೊಂಡಿರುತ್ತವೆ.
ಈಗ ಹೊಸ ಹುಡುಗರು ಸಾಲುಗಟ್ಟಿ ನಾಟಕಕ್ಕೆ ಬರುತ್ತಿದ್ದಾರೆ. ವರ್ಷವೊಂದರಲ್ಲಿ ಕನ್ನಡ ರಂಗಭೂಮಿಯಲ್ಲಿ ಕನಿಷ್ಟ ಎಂಬತ್ತು ಜನ ಯುವಕರು ನಾಟಕದ ವಿಷಯದ ಮೇಲೆ ಡಿಪ್ಲೋಮ ಪದವಿ ಪಡೆದುಕೊಳ್ಳುತ್ತಾರೆ. ಇದೊಂದು ಸಂತಸದ ಸಂಗತಿ ಆದರೂ ಅವರ ಅಧ್ಯಯನ ಕ್ರಮದಲ್ಲಿ ಸಹಜತೆಗೆ ಹೊರತಾದ ಕೆಲ ಕೋತಿ ಚೇಷ್ಟೆಗಳು, ತಂತ್ರಗಳು, ಸಿದ್ಧಮಾದರಿಯ ಅಭಿನಯಗಳು ರೂಢಿಯಾಗಿಬಿಡುತ್ತವೆ. ಕನ್ನಡ ಅಕ್ಷರಗಳ ಸ್ಪಷ್ಟ ಉಚ್ಛಾರಣೆ ಕಲಿಸುವುದರೊಂದಿಗೆ ದೇಹಸಂಸ್ಕಾರ ಮಾಡಿಸುವುದರೊಳಗೆ ಅವರ ಕಲಿಕೆಯ ಆಸಕ್ತಿ ನಿಂತು ಹೋಗಿಬಿಟ್ಟಿರುತ್ತದೆ. (ಇದು ನನಗು ಅನ್ವಯಿಸುತ್ತದೆ) ಮುಂದೆ ಅವರ ಮುಖದ ಮುಂದಿನ ಕನಸುಗಳೆಲ್ಲ ಬೆಂಗ್ಳೂರು ಒಳಗೊಂಡು ರಚಿತವಾಗುವ ಕಾರಣಕ್ಕೋ ಏನೋ ಬಂದ ಯುವಕರು ಹಾಗೆ ಎಲ್ಲೋ ಕಾಣದಾಗಿಬಿಡುತ್ತಾರೆ. ಆ ಫ್ರೇಮ್ ಸಂಸ್ಕೃತಿಗೆ ಬೇಕಾದ ಅಭಿನಯದ ಮಾದರಿಯನ್ನ ಅವರು ಕಲಿಯದ ಕಾರಣಕ್ಕಾಗಿ ಏನೋ ಅವರು ಅಷ್ಟಾಗಿ ಸ್ಕ್ರೀನ್ ಮೇಲೆ ಕಾಣಿಕೊಳ್ಳುವುದಿಲ್ಲ. ಇದೆಲ್ಲ ಆಗುವ ಹೊತ್ತಿಗೆ ಅವರ ಉತ್ಸಾಹವೇ ಹಿಂಗಿ ತಾಂತ್ರಿಕ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿಬಿಡುತ್ತಾರೆ. ನೋಡಿ ರಂಗದ ಮೇಲೆ ನಿಂತು ನಾಟಕ ಮಾಡುವ ಹೊತ್ತಲ್ಲಿ ಅವರ ಅಭಿವ್ಯಕ್ತಿಗೆ ಬಹು ಆಯಾಮಗಳು ಒದಗಿ ಬಂದು ಪ್ರೇಕ್ಷಕರೊಳಗೆ ಹತ್ತೆಂಟು ಪ್ರಶ್ನೆಗಳನ್ನು ಪ್ರಚೋದಿಸಿದ ನಟ ಹೀಗೆ ಎಲ್ಲೋ ಕಾಣದಾದಾಗ ಕನ್ನಡ ರಂಗಭೂಮಿ ಪರಂಪರೆ ಆಗಿ ಉಳಿಯುವುದಾದರೂ ಹೇಗೆ? ಅದಿರಲಿ ನಟನೊಬ್ಬ ಹತ್ತೆಂಟು ವರ್ಷಗಳ ಕಾಲ ಬರೀ ನಾಟಕದ ಸಾಧನೆಯೊಳಗೆ ಬದುಕಿ ಉಳಿಯುವುದು ಕಷ್ಟ, ಯಾವನೋ ಒಬ್ಬ ಹಾಗೆ ಬದುಕುತ್ತೇನೆಂದು ಹಠ ಹಿಡಿದರೂ ಅವನ ಸ್ವಂತ ಬದುಕಿನ ಸಂಕಟಗಳನ್ನು ಯಾವ ಮುಖವಾಣಿಯಲ್ಲಿ ಹೇಳಿಕೊಳ್ಳಬೇಕು? ಇನ್ನು ಕೆಲ ನಟರು ಹೊಟ್ಟೆ-ಬಟ್ಟೆಗೆ ಬೇರೆ ಬೇರೆ ಕೆಲಸಗಳನ್ನು ನಚ್ಚಿಕೊಂಡು ಬಿಡುವಿನ ಸಂದರ್ಭದಲ್ಲಿ ನಾಟಕ ಮಾಡುತ್ತ ಬಂದಿದ್ದಾರೆ. ಅಂಥವರು ಸಹಿತ ಈ ತರಬೇತಾದ ಹೊಸ ಹುಡುಗರನ್ನ ಕೊಂಚ ‘ಏನು ಮಾಡುತ್ತಾರೋ ನೋಡೋಣ’ ಎಂಬ ವಕ್ರದೃಷ್ಟಿಯಲ್ಲಿ ನೋಡುವಾಗ ಅವರ ಪರಂಪರೆ ಇವರಿಗೆ ಬಳುವಳಿಯಾಗಿ ಬರುವುದಾದರೂ ಹೇಗೆ ಸಾಧ್ಯ? ಇನ್ನು ತರಬೇತಾದ ಕೆಲವರು ಹವ್ಯಾಸವೆಂದು ನಾಟಕ ಮಾಡುವವರನ್ನು ಗರ್ವದಿಂದ ನೋಡುವುದೂ ಒಂದಿದೆ… ಅದು ತಾವು ಆ ಕುರಿತಾಗಿ ತಿಳುವಳಿಕೆ ಉಳ್ಳವರು ಎಂಬ ಸೊಕ್ಕು ಅದು-ಹಾಗಂದ ಮಾತ್ರಕ್ಕೆ ಅವರನ್ನು ದೂರಿಕೊಂಡು ಅವರು ಅಲ್ಲಿ ಓದಿದವರು ಇವರು ಇಲ್ಲಿ ಓದಿದವರು ಎಂದು ಮಾತೃ ಸಂಸ್ಥೆಯೊಂದಿಗಿನ ಇವರ ಹೊಟ್ಟೆಕಿಚ್ಚನ್ನ ಹೊಸ ಹುಡುಗರ ಮೇಲೆ ತೀರಿಸಿಕೊಳ್ಳಲು ಪ್ರಯತ್ನಿಸುವುದು ಇದ್ದೆ ಇರುತ್ತದೆ. ಇದೆಲ್ಲದರ ನಡುವೆ ಹೊಸ ತಲೆಮಾರಿನ ನಮಗೆಲ್ಲ ನಾಟಕ ಪರಂಪರೆಯಾಗಿ ಉಳಿಸಬೇಕೆಂಬ ಆಶಯವೇನೋ ಇದೆ..1 ಆದರೆ ಕನ್ನಡದ ನಟನಾ ಪರಂಪರೆ ಗಟ್ಟಿಯಾಗುಳಿಯಲು ನಮ್ಮ ನೆಲದ ಒಂದು ಅಭಿನಯ ಪದ್ಧತಿ ಕುರಿತಾದ ಸಂಶೋಧನೆ ಆಗಲಾರದ ಹೊರತು ಮತ್ತು ನಾಟಕದಲ್ಲಿ ನಟಿಸುವ ನಟನಿಗೆ ಪಗಾರ ಸಿಗದ ಹೊರತು ನಾಟಕ ಪರಂಪರೆಯಾಗಿ ಉಳಿಯಲಾರದು. ನಾಲ್ಕು ನಾಟಕ ಮಾಡಿದವ ನಿರ್ದೇಶನ ಮಾಡಲು ಆರಂಭಿಸುತ್ತಾನೆ. ತನ್ನದೇ ಆದ ಸರ್ಕಲ್ಲೊಂದರ ಮೂಲಕ ಪ್ರಚಾರಕ್ಕೆ ಬಿದ್ದು ಶ್ರೇಷ್ಟತೆಯ ಗುಂಗಿನಲ್ಲಿ ಮುಳುಗಿಬಿಡುತ್ತಾನೆ. ಅಂಥವರೆಲ್ಲ ನಾಟಕ ಪರಂಪರೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಾರರು. ಹೌದು ನಾಟಕ ಪರಂಪರೆ ಆಗಲೇಬೇಕು.

ಬೀದಿನಾಟಕ

ಸಣ್ಣ ಬುದ್ಧಿ. ಯಾರಾದರೂ ಏನಾದರು ಮಾಡಿದರೇ ಅದು ನಾನು ಯಾಕೆ ಮಾಡಲಿಲ್ಲ ಅಂತ. ಅದನ್ನು ಸಾಧಿಸಲೇ ಬೇಕು ಅಂತ ದಾರಿ ಕಾಯೋದೋ, ಇಲ್ಲಾ ಹುಡುಕಾಡುತ್ತಾ ಸಾಗಿಯೇ ಬಿಡುವುದು. ಈ ಬ್ಲಾಗ್, ಬರಹನೂ ಹಾಗೇ. ಅಂದು ನಾನು ಇನ್ನೂ ಆರನೇಯತ್ತು. ನಮ್ಮ ಮನೆಯ ಹತ್ತಿರವಿದ್ದ ಈ ಹುಡುಗರು ನಮ್ಮ ಶಾಲೆಗೆ ಯಾಕೆ ಬಂದರೂ ಅಂತ ನೋಡುತ್ತಾ ನಿಂತಿದ್ದೆ. ಅದರಲ್ಲಿ ನನ್ನ ಚಿಕ್ಕಪ್ಪನನ್ನು ಕಂಡೇ ಆದರೆ ಆ ಗದ್ದಲದಲ್ಲಿ ನನಗೆ ಅವರನ್ನು ಮುಟ್ಟಲಿಕ್ಕೂ ಆಗುತ್ತಿರಲಿಲ್ಲ. ಕಾರಣ ನಮ್ಮ ಶಾಲೆಯ ಮಕ್ಕಳ ಸಂಖ್ಯೆ ಆರುನೂರಕ್ಕೂ ಮಿಕ್ಕಿ ಇತ್ತು. ಶಾಲೆಯ ಕಾಂಪೋಂಡಿನಲ್ಲಿ ದೊಡ್ಡ ಸರ್ಕಲ್ ಮಾಡಿ, ಕಂಜರ್ ಹಾಗೂ ಹಲಿಗೆ ಬಾರಿಸುತ್ತಾ ನಿಂತಾಗ ಕಟ್ಟೆಅಯ ಮೇಲಿದ್ದ ನಮಗೆ ಒಂದು ಸಣ್ಣ ಹುಡುಗಿ, ನಮ್ಮ ವಯಸ್ಸಿನ ಹಲವಾರು ಹುಡುಗರು ಕಂಡರು. ಅದರಲ್ಲಿ ನನ್ನೊಂದಿಗೆ ಆಡುತ್ತಿದ್ದ ನನಗಿಂತ ಹಿರಿಯರು ಇದ್ದರು. ನನಗೆ ಆಶ್ಚರ್ಯ. ಇವರೇನೂ ಮಾಡುತ್ತಾರೆ ಇಲ್ಲಿ ಎಂದು. ನಮ್ಮ ಶಾಲೆಯ ಶಿಕ್ಷಕರು ಅವರನ್ನು ಪರಿಚಯಿಸುತ್ತಾ, ಸಾಕ್ಷರತೆಯ ಕುರಿತು, ಪರಿಸರದ ಕುರಿತು ಬೀದಿನಾಟಕವಾಡಲು ಬಂದಿರುವುದಾಗಿ ತಿಳಿಸಿದರು. ನನಗೆ ನನ್ನಷ್ಟಿರುವ ಇವರೆಲ್ಲ ಏನು ಮಾಡುತ್ತಾರೆ ಎಂದು ಆಲೋಚಿಸಿದೆ. ನನಗೆ ಶಾಲೆಯ ಯಾವ ಕಾರ್ಯಕ್ರಮದಲ್ಲೂ ಕರೆದುಕೊಳ್ಳುತ್ತಿರಲಿಲ್ಲ. ತರಗತಿಯಲ್ಲಿ ಹೆಚ್ಚು ಅಂಕಗಳಿಸುವ, ಸ್ವಲ್ಪ ಜೋರಾಗಿರುವ ಹುಡುಗ- ಹುಡುಗಿಯರೇ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಕಾಣಿಸುತ್ತಿತ್ತು. ನಮ್ಮಂಥ ಮಂದಗತಿಯವನು ಎಲ್ಲಿಗೂ ಆಗದವನಾಗಿದ್ದೆ.

ಉಚಿತ ನೋಟ್ ಪುಸ್ತಕ ವಿತರಣೆ

ಗೋನಾಳ ರಾಜಶೇಖರ ಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಕುಷ್ಟಗಿ ತಾಲೂಕ್ ನಾದ್ಯ೦ತ ಪ್ರೌಡ ಶಾಲೆ ಪ್ರತಿ  ವಿದ್ಯಾರ್ಥಿಗಳಿಗೆ ನಾಲ್ಕು ಉಚಿತ ನೋಟ್ ಪುಸ್ತಕಗಳನ್ನು ನೀಡಲಾಯಿತು. ಸಮಾಜ ಸೇವಕರಾದ  ಗೋನಾಳ ರಾಜಶೇಖರ ಗೌಡ ಅವರಿಗೆ ಹಾಗೂ ಅವರ ತಂಡದವರಿಗೆ ಹೃತ್ಪೂರ್ವಕ ಧನ್ಯಾವಾದಗಳು.

Image

ರಂಗಭೂಮಿ

ಘಟಾನುಘಟಿಗಳಲ್ಲಿ ಒಬ್ಬರು….
ಈ ದಿನ ವಿಶ್ವರಂಗಭೂಮಿ ದಿನ. ಧ್ಯಾನಕ್ಕೆ ಸಿಗುವ ಒಂದಷ್ಟು ವ್ಯಕ್ತಿತ್ವಗಳ ಮಾದರಿಯನ್ನು ಅನುಸರಿಸಿ ರಂಗಕಾಯಕ ಮಾಡುವ ಹೊತ್ತಲ್ಲಿ – ಬಸು, ಅಕ್ಷರ, ಪ್ರಸನ್ನ, ಇಕ್ಬಾಲ್ ಅಹ್ಮದ್, ರಘುನಂದನ, ಪ್ರಕಾಶ ಗರೂಡ, ಜಂಬೆ- ಎಲ್ಲ ನೆನಪಾಗುತ್ತಾರೆ. ಅವರೊಂದಿಗೆ ಕಳೆದ ಕ್ಷಣಗಳು ನೆನಪಾಗುತ್ತವೆ. ಬೆನ್ನು ತಟ್ಟಿ ಪ್ರೋತ್ಸಾಹಿಸಿದ, ತಪ್ಪಿದಲ್ಲಿ ಕಾಲೆಳೆದು ಕಿಚಾಯಿಸಿದ ಅಲ್ಲದೆ ಹೊಸ ಓದು,ಹೊಸ ನೋಟದ ಹೊಸ ಕಾಣ್ಕೆಗಳನ್ನು ಹಾಕಿಕೊಟ್ಟು ಹೊಸದಾಗಿ ರಂಗಭೂಮಿಗೆ ಬರುತ್ತಿರುವ ಯುವ ಮಿತ್ರರೊಂದಿಗೆ ಇಂದಿಗೂ ಅದೇ ಉತ್ಸಾಹದಲ್ಲಿ ಕೆಲಸ ಮಾಡುವ ಅವರ ಬದ್ಧತೆ ಕೊಂಚ ಧೈರ್ಯ ಕೊಡುತ್ತದೆ. ಯಾವದೋ ಕ್ಷಣದಲ್ಲಿ ಸಾಕಪ್ಪ ಈ ರಂಗಭೂಮಿ ಸಹವಾಸ ಅಂದುಕೊಳ್ಳುವಾಗ ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು ಥಟ್ಟನೆ ನೆನಪಾಗುತ್ತಾರೆ….. ಇವತ್ತು ಈಗ ನೆನಪಾದವರು ಚಿದಂಬರರಾವ್ ಜಂಬೆ…. ಮೂವತ್ತು ವರ್ಷಗಳ ಕಾಲ ರಂಗಶಿಕ್ಷಣ ನೀಡಿದ, ಕನ್ನಡ ರಂಗಭೂಮಿಯಲ್ಲಿ ಬಹಳಷ್ಟು ನಟ-ನಟಿಯರಿಗೆ, ನಿರ್ದೇಶಕರುಗಳಿಗೆ, ರಂಗತಂತ್ರಜ್ಞರುಗಳಿಗೆ ಪಾಠ ಮಾಡಿದ, ರಂಗದೀಕ್ಷೆ ನೀಡಿದ ಮಹಾನ್ ವ್ಯಕ್ತಿತ್ವ ಶ್ರೀ ಚಿದಂಬರರಾವ್ ಜಂಬೆ ಅವರದ್ದು. ಆಧುನಿಕ ಕನ್ನಡ ರಂಗಭೂಮಿಯಲ್ಲಿ ನಾಟಕ ಕಲಿಸುವ, ಕಲಿಯುವ, ನೋಡುವ ಪರಂಪರೆಯನ್ನು ಬೆಳೆಸಿದ ಕೆಲವೇ ನಿರ್ದೇಶಕರುಗಳಲ್ಲಿ ಜಂಬೆ ಅವರ ವ್ಯಕ್ತಿತ್ವ ಗುರುವಿನ ಸ್ಥಾನದ್ದು. ಅವರು ನನಗೆ ಗುರುಗಳಲ್ಲ ಆದರೂ ಅವರ ನಿರ್ದೇಶನದ ನಾಟಕಗಳಿಂದ ನಾನು ಕಲಿತಿದ್ದೇನೆ, ಅವರ ಒಡನಾಟದಿಂದ ನಾಟಕ ಕಟ್ಟುವ, ಸಾಹಿತ್ಯ ಕೃತಿಯೊಳಗಿನ ನಾಟಕೀಯ ಭಾವಗಳನ್ನು ಅರ್ಥೈಸಿಕೊಳ್ಳುವ, ಅಲ್ಲದ್ದನ್ನೂ ನಾಜೂಕಾಗಿ ಕ್ರಿಯಾಶೀಲಗೊಳಿಸುವ, ನವಶಾಸ್ತ್ರೀಯ ಕಲಾ ಮಾರ್ಗಗಳನ್ನು ಆಧುನಿಕವಾಗಿ ಒಳಗೊಳ್ಳುವ…. ಹೀಗೆ ಅವರಿಂದ ಏನೆಲ್ಲ ಕಲಿತಿದ್ದೇನೆ.
ಆ ವ್ಯಕ್ತಿತ್ವ ಅಖಾಡಾದ ಮುಂದೆ ಕುರ್ಚಿ ಹಾಕಿಕೊಂಡು ಕೂತಿದ್ದರೆ ಸಾಕು ನಾಟಕದ ತಾಲೀಮಿಗೊಂದು ತೂಕ ತನ್ನತಾನೇ ಬಂದುಬಿಡುತ್ತದೆ. ಇದು ಉತ್ಪ್ರೇಕ್ಷೆ ಮಾತಲ್ಲ ಅವರನ್ನು ಹತ್ತಿರದಿಂದ ಬಲ್ಲ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ನಾಟಕ ಹೀಗೇ ಮಾಡಬೇಕೆಂದು, ಅಭಿನಯ ಅಂದರೆ ಇದು ಎಂದು ತಮಗೆ ತಿಳಿದ ಸತ್ಯವನ್ನು ಬಲವಂತವಾಗಿ ನಟರ ಮೇಲೆ ಹೇರುವ ಅದೆಷ್ಟೋ ನಿರ್ದೇಶಕರ ಬಗ್ಗೆ ನಟ-ನಟಿಯರು ಮಾತಾಡಿಕೊಳ್ಳುವುದನ್ನು ಕೇಳಿದ್ದಿದೆ. ಆದರೆ ಕಲಿಸುವ ಸೂಕ್ಷ್ಮತೆಯನ್ನು ಉಳಿಸಿಕೊಂಡು ನಟರ ಅಂತಃಸ್ಪೂರ್ತಿಗೆ ಇಂಬು ಕೊಡುವ ದೃಷ್ಟಿಯುಳ್ಳ ಕೆಲವು ನಿರ್ದೇಶಕರಲ್ಲಿ ಶ್ರಿ ಚಿದಂಬರರಾವ್ ಜಂಬೆ ಅವರು ಒಬ್ಬರು. ಸೌಂದರ್ಯ ಪ್ರಜ್ಞೆ ಮತ್ತು ನಟರ ಭಾವಪ್ರಪಂಚ ಎರಡು ಒಟ್ಟೊಟ್ಟಿಗೆ ಅವರ ನಾಟಕಗಳಲ್ಲಿ ಕಾಣುತ್ತದೆ. ಯಾವ ನಾಟಕವೇ ಆಗಲಿ ರಂಗಕೃತಿಯ ಸಂಕಲನದಲ್ಲಿಯೇ ಅವರು ಗೆದ್ದು ಬಿಟ್ಟಿರುತ್ತಾರೆ. ರಂಗಸಾಧ್ಯತೆಯನ್ನು ಕಲಾತ್ಮಕವಾಗಿ ಆಗು ಮಾಡುವ ಆ ವಿಧಾನದಲ್ಲಿ ಸಹನೆ ಮತ್ತು ನಾಟಕದ ಒಟ್ಟು ವಿನ್ಯಾಸವನ್ನು ಜತನದಲ್ಲಿಟ್ಟುಕೊಂಡು ಕೃತಿಯ ಆಶಯವನ್ನು ವಿಸ್ತಾರವಾಗಿ ಪದರು ಪದರು ಬಿಡಿಸಿಡುವ ಕ್ರಮ ಅವರ ಶಿಸ್ತಿನೊಂದಿಗೆ ನಾಟಕಕ್ಕೂ ಬಂದು ಬಿಡುತ್ತದೆ. ತಾಲೀಮು ಹಂತದಲ್ಲಿ ನಟರೊಂದಿಗೆ ಒಡನಾಡುವುದು, ನೇಪಥ್ಯವನ್ನು ಜೀವಂತ ಪಾತ್ರವೆಂದು ಕಾಣುವುದು, ಹಲವಾರು ತಂತ್ರಜ್ಞರನ್ನೂ ಕೂಡಿಸಿಕೊಂಡು ಒಂದು ಮಾದರಿಯ ಕುಸುರಿ ಕೆಲಸವನ್ನು ನಾಟಕದಲ್ಲಿ ಪಾಕಗೊಳಿಸುವ ಅವರ ರಂಗಭೂಮಿ ಪ್ರೀತಿ ಎಂಥವರನ್ನು ಉತ್ಸಾಹಿತರನ್ನಾಗಿಸುತ್ತದೆ. ಸಂಘಟಿಸುವ ಚಾತುರ್ಯದಿಂದ ದೂರ ಉಳಿದು ಎಲ್ಲವನ್ನೂ ನಾನೇ ಮಾಡುತ್ತೇನೆಂದು ಹೊರಡುವ ಈ ದಿನಮಾನದಲ್ಲಿ ಹೀಗೆ ರಂಗಬಳಗವನ್ನು ನಾಟಕದ ನೆಪದಲ್ಲಿ ಒಟ್ಟಾಗಿಸುತ್ತಿರುವುದು ಮತ್ತು ಯುವ ರಂಗಕರ್ಮಿಗಳಿಗೆ ಆದ್ಯತೆ ನಿಡುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಕನ್ನಡದ ಎರಡು ಪ್ರಸಿದ್ಧ ರಂಗಶಾಲೆಗಳಲ್ಲಿ ಆಚಾರ್ಯ ಪುರುಷರಾಗಿ ಕೆಲಸ ಮಾಡಿ, ರಂಗಾಯಣದ ನಿರ್ದೇಶಕರಾಗಿ, ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಚಾಪ್ಟರ್ ತೆರೆದು ಶಿಬಿರಗಳನ್ನು ನಡೆಸಿಯೂ ಎಳೆಮಗುವಿನಂತೆ ಹೊಸ ಹುಡುಗರೊಂದಿಗೆ ಕೈ ಜೋಡಿಸಿ ಸಂಘಟನೆ ಕಟ್ಟುವ ಉತ್ಸಾಹದಲ್ಲಿರುವ ಅವರ ಬದ್ಧತೆ ನಮಗೆ ಮಾದರಿಯಾಗಿದೆ

ಇಂಗ್ಲಿಷ್ ಮಾಧ್ಯಮ

ನಾನು ವಾಸಿಸುವ ಹಳ್ಳಿಯಲ್ಲಿ ಇಂಗ್ಲಿಷ ಶಿಕ್ಷಣಕ್ಕಾಗಿ ಹಾತೊರೆಯುವ ಮಕ್ಕಳದ್ದೊಂದು ಪಡಿಪಾಟಲು ಕೇಳುವವರಿಲ್ಲ. ಇಲ್ಲಿ ಸೇರಲು ಬಂದಿರುವ ವಿದ್ಯಾರ್ಥಿಗಳೆಲ್ಲ ರೈತಕುಟುಂಬದಿಂದ ಬಂದವರು. ಅವರೆಲ್ಲ ಈ ಮಠದ ಇಂಗ್ಲಿಷ ಮಾಧ್ಯಮದ ಶಾಲೆಯನ್ನ ಸೇರಲೇಬೇಕೆಂದು ದೂರದ ಊರುಗಳಿಂದ ಬಂದವರು. ಅವರ ಕೈಯೊಳಗಿನ ಟ್ರಂಕು-ಹಾಸಿಗೆ ಸುರುಳಿ ನೋಡುತ್ತಿದ್ದ ಹಾಗೆ ಊಹಿಸಬಹುದಾದ್ದು ಅಂದ್ರೆ ಅವರೆಲ್ಲ ಹಳ್ಳಿ ಮಕ್ಕಳೇ ಸೈ. ಹಾಗೆ ಅವರನ್ನು ಕರೆದು ಮಾತಾಡಿಸಿದಾಗ ತಿಳಿದದ್ದು ಅವರು ಇಂಗ್ಲಿಷ ಮಾಧ್ಯಮವನ್ನು ಆಯ್ದುಕೊಂಡ ಕಾರಣಕ್ಕಾಗಿಯೇ ಇಷ್ಟು ದೂರ ಬಂದವರು. ಕನ್ನಡ ಮಾಧ್ಯಮದ ಮಾಧ್ಯಮಿಕ ಶಾಲೆಯಲ್ಲಿ ಸೀಟುಗಳು ಇನ್ನೂ ಪೂರ್ಣ ಭರ್ತಿಯಾಗಿಲ್ಲವಾದರೂ ಇಂಗ್ಲಿಷ್ ಮಾಧ್ಯಮದ ಮಾಧ್ಯಮಿಕ ಶಾಲೆಯಲ್ಲಿ ಮಿತಿಮೀರಿ ಪ್ರವೇಶಗಳು ಆಗಿವೆ. ದುರಂತವೆಂದರೆ ಕಳೆದ ಸಾಲಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದ ಕೆಲವು ವಿದ್ಯಾರ್ಥಿಗಳಿಗೆ ತಡವಾಗಿ ಸೇರಲು ಬಂದ ಕಾರಣಕ್ಕಾಗಿ ಪ್ರವೇಶ ಸಿಕ್ಕದಾಗಿದೆ. ಹಾಗೆ ತಡವಾಗಿ ಪ್ರವೇಶ ಬಯಸಿ ಬಂದ ಸಾಣೇಹಳ್ಳಿಯ ಪಕ್ಕದ ಊರಿನ ಪೂಜಾ ಎಂಬ ಹುಡುಗಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರವೇಶ ಸಿಗಲಿಲ್ಲವೆಂಬ ಕಾರಣಕ್ಕಾಗಿಯೇ ದಿನಾಂಕ 09/ಜೂನ್/2012 ರಂದು ವಿಷಕುಡಿದು ಆತ್ಮಹತ್ಯ ಮಾಡಿಕೊಂಡಿದ್ದಾಳೆ. ಆ ಮಗಳ ತಂದೆ ಆ ರೈತ ಯಾವ ಕೆಲಸದ ಅವಸರಕ್ಕಾಗಿ ಅವನು ತಡವಾಗಿ ಬಂದನೋ ಅದನ್ನು ಶಪಿಸುತ್ತಿದ್ದಾನೆ. ಈ ಹಳ್ಳಿಮಕ್ಕಳ ಇಂಗ್ಲಿಷ್ ವ್ಯಾಮೋಹ-ಕನ್ನಡ ಪ್ರೀತಿಯನ್ನ ಕಂಡಾಗ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಅವಶ್ಯಕತೆಯನ್ನು ಕುರಿತಾಗಿ ಗಹನವಾಗಿಯೇ ಆಲೋಚಿಸಬೇಕಾಗಿದೆ.
ಹುಲಿ ಸಿಂಹ ಶಾರ್ದೂಲಗಳ ಜೊತೆಗೆ ಹುಲ್ಲೆ ಹಸು ಕುರಿಗಳು ಒಡನಾಡಿಕೊಂಡು ಬದುಕುವ ಮಾರ್ಗವೊಂದು ತೆರೆದುಕೊಂಡದ್ದು ಈ ಇಂಗ್ಲಿಷ್ ಎಂಬ ಮಾಯಾವಿ ಭಾಷೆಯಿಂದ ಎಂಬುದನ್ನು ಅರ್ಥಮಾಡಿಕೊಳ್ಳುವುದಾದರೆ ಸಮಾನ ಶಿಕ್ಷಣ ಸಾಧ್ಯವಾಗುತ್ತದೆ. ಆದರೆ ಈ ಬುದ್ಧಿವಂತ ವರ್ಗ ಹೋರಾಟದ ಕೆಚ್ಚೆದೆಯ ಬೀಸು ದೊಣ್ಣೆಯ ತುಂಬು ಅಭಿಮಾನದ ಗುಟುರು ಹಾಕುತ್ತಲಿದೆ. ಅದು ಯಾರ ವಿರುದ್ಧ – ಶೂದ್ರಾತಿಶೂದ್ರ ಬಡವರ, ಹಳ್ಳಿಗರ, ರೈತರ ಮಕ್ಕಳ ವಿರುದ್ಧ. ಭಾಷೆಯೂ ಕೀಳರಿಮೆಯನ್ನು ಸೃಷ್ಟಿಸುತ್ತದೆ ಥೈಯ್ಯಾ ಥಕ್ಕ ಅಂತ ಕುಣಿಸಿಬಿಡುತ್ತದೆ. ಕನ್ನಡದಲ್ಲಿ ಯೋಚಿಸುವವನು ಅಂಗ್ರೇಜಿಯಲ್ಲಿ ವಿವರಿಸಬಲ್ಲವನಾಗಿರುತ್ತಾನೆ. ಅಂಥವನು ಎಲ್ಲ ದೇಶಗಳ ಎಲ್ಲ ಕಂಪನಿಗಳಲ್ಲೂ ಕೆಲಸ ಮಾಡಬಲ್ಲವನಾಗಿರುತ್ತಾನೆ. ಅವನಿಗೆ ಸಿಗುವ ಪ್ರಾಧಾನ್ಯತೆಯನ್ನು ಕನ್ನಡದಲ್ಲಿ ಯೋಚಿಸಿ ಕನ್ನಡದಲ್ಲೇ ವ್ಯವಹರಿಸಬಲ್ಲಾತನು ಪಡೆಯಲಾರ…. ಇದನ್ನು ಅರ್ಥವತ್ತಾಗಿ ವಿವರಿಸುವ ಅಗತ್ಯವಿಲ್ಲ. ಯಾಕಂದ್ರೆ ಎರಡು ಮೂರು ವರ್ಗಗಳು ಗೆರೆ ಕೊರೆದುಕೊಂಡೇ ಹುಟ್ಟಿಕೊಳ್ಳುತ್ತಿರುವ ಈ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಸಿಗುವ ಮಾನ್ಯತೆ ಕನ್ನಡಕ್ಕೆ ಸಿಕ್ಕಿಲ್ಲ.
ಆದರೆ…..
ಓದು ಚಿಂತನೆ ಅನ್ನುವುದು ವಿಶ್ವವ್ಯಾಪಕವಾಗಿ ಆಯಾ ಭಾಷೆಗಳಿಂದ ತುರ್ಜುಮೆಯ ರೂಪದಲ್ಲಿ ಸಿಕ್ಕುವುದು ಇಂಗ್ಲಿಷ್ ಎಂಬ ಕೊಂಡಿಯೊಂದರ ಮುಖೇನವೆಂಬುದು ಸಕಲ ಜೀವಾತ್ಮರಿಗೂ ತಿಳಿದ ಸತ್ಯ. ಹಾಗೆಂದ ಮಾತ್ರಕ್ಕೆ ಇಂಗ್ಲಿಷ ದೇವಭಾಷೆ ಏನೂ ಅಲ್ಲ. ಸಂಪರ್ಕ ಸಹಜವಾದ ಜಗತ್ತಿಗೆ ತಿಳಿದ ಏಕೈಕ ಭಾಷೆ ಇಂಗ್ಲಿಷ್ ಆದ್ದರಿಂದ ಇಂಗ್ಲಿಷ್ ಮಾಧ್ಯಮವನ್ನು ಖುದ್ದಾಗಿ ಸರಕಾರವೇ ಅಳವಡಿಸುತ್ತಿರುವಾಗ ಅದನ್ನು ವಿರೋಧಿಸುವುದು ಯಾವ ನ್ಯಾಯ…? ಜಗತ್ತಿನ ಎಲ್ಲ ಭಾಷೆಯ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಅನುವಾದವೋ, ಛಾಯಾನುವಾದವೋ, ರೂಪಾಂತರವೋ…. ಒಟ್ಟಿನಲ್ಲಿ ಯಾವುದೇ ರೂಪದಲ್ಲಿ ಬಂದರೂ ಅದರ ಸ್ವಾದ ಸ್ವಾರಸ್ಯವನ್ನು ಕನ್ನಡದವರೇ ಆಗಿ ಓದುವ ನಮಗೆ ಇಂಗ್ಲಿಷಿನ ಷೇಕ್ಸಪೀಯರ್ ಕನ್ನಡದಲ್ಲಿ ಶೇಷಣ್ಣನಾಗಿಬಿಡುತ್ತಾನೆ. ನಮ್ಮದೇ ಏಕಾಂತದ ಒಳಗಿನ ಮೊಳಕೆಯೊಡೆಯುವ ಹೊತ್ತು-ಅವನ ಸಾನೆಟ್, ನಾಟಕಗಳಲ್ಲಿ ಕೇಂದ್ರವಾಗಿರುತ್ತದೆ. ಆದರೆ ಕನ್ನಡದ ಅಭಿಮಾನವೆಂಬ ಸ್ವಹಿತಾಸಕ್ತಿಯ ದುರಹಂಕಾರ ಡಬ್ಬಿಂಗ್ ವಿಷಯದಲ್ಲಿ ಏಕಾಏಕಿ “ಡಬ್ಬಿಂಗ್ ಕನ್ನಡ ಭಾಷೆಗೆ ಮಾರಕ” ಎಂದು ಗುಡುಗುವ ಮಹಾಶಯರ ಘರ್ಜನೆಯು ಹೇಗೆ ಹಾಸ್ಯಾಸ್ಪದವಾಗಿ ಕಾಣುತ್ತದೆಯೋ ಹಾಗೇ ಈ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ (6ನೇ ತರಗತಿಯಿಂದ) ಅಳವಡಿಸುವುದರ ವಿರುದ್ಧ ಗುಡುಗಿದವರ ಬಗ್ಗೆಯೂ ಅನುಮಾನ ಮೂಡುತ್ತದೆ.
ಇಂಗ್ಲಿಷ್ ಮತ್ತು ಕನ್ನಡವೆಂಬ ಓದುವ ಮಾಧ್ಯಮದ ಒಳಾಂಗಣದ ಒಳಗೇ ರಚಿತಗೊಳ್ಳುವ ಈ ಎರಡು ವರ್ಗಗಳು ಬರೀ ಕನ್ನಡ-ಇಂಗ್ಲಿಷಿನದ್ದು ಎಂದು ವರ್ಗೀಕರಿಸಿದರೆ ತಪ್ಪಾದೀತು. ಇದರಲ್ಲಿ ಮೇಲ್ವರ್ಗ ಮತ್ತು ಕೆಳವರ್ಗ(ಹಿಂದುಳಿದ) ಎಂಬುದರ ನಡುವೆ ಮಧ್ಯಮ ವರ್ಗವೆಂಬ ಮತ್ತೊಂದು ಕವಲಿದೆ. ವಲಸಿಗರು ಮತ್ತು ಶ್ರಮಿಕ ನಗರವಾಸಿ ಮಕ್ಕಳು ಇಂಗ್ಲಿಷ್ ಮಾಧ್ಯಮವೆಂದು ಪ್ರವೇಶ ಪಡೆಯುವ ಎಷ್ಟೋ ಶಾಲೆಗಳಲ್ಲಿ ಸೌಲಭ್ಯದ ಕೊರತೆಯಿಂದಾಗಿ ಅರೆಬರೆ ಶಿಕ್ಷಣ ಪಡೆಯುವ ಇವರು ಅಗಾಧವಾಗಿ ಕನ್ನಡವನ್ನು ಪ್ರೀತಿಸುತ್ತಾರೆ ಅಂತೆಯೆ ಇಂಗ್ಲಿಷನ್ನು ಮೆಚ್ಚುತ್ತಾರೆ. ಇವರಲ್ಲಿ ಭಾಷೆಯ ಹಂಬಲದ ಕನಸುಗಳು ಭರವಸೆಯ ಬದುಕನ್ನು ಚಿಗುರಿಸುತ್ತಿರುತ್ತವೆ. ಕನ್ನಡದ ನವಮಾನವ ಕಲ್ಪನೆ ರೂಪುಗೊಳ್ಳುವುದಾದರೆ ಈ ಮಕ್ಕಳು ಹರಿದಾಡುವ ಅಂಗಳದಲ್ಲೆಲ್ಲ ಕನ್ನಡದ ಕಂಪು ಸೂಸೀತು. ಇವರ ಚೈತನ್ಯವೇ ಎರಡರ ಸೇತುವೆ ಆದೀತು ಎಂಬ ಭರವಸೆಯನ್ನು ನಾವು ಇಡಬಹುದಾಗಿದೆ. ಅವಸರದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೊಳಿಸಿದರೆ ಸರಕಾರಿ ಶಾಲೆಗಳ ಬೋಧನಾ ಸೌಕರ್ಯ ಹೇಗಿದೆ? ಇಂಗ್ಲಿಷ್ ಕಲಿಕೆಯನ್ನು ಸಮರ್ಥವಾಗಿ ಮಾಡಬಲ್ಲ ಶಿಕ್ಷಕರು ಎಲ್ಲಿದ್ದಾರೆ ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಅಂತದ್ದೊಂದು ಅವಕಾಶ ಈ ಮಧ್ಯಮವರ್ಗೀಯ ಮಕ್ಕಳಿಗೆ ದಕ್ಕುತ್ತಿರುವಾಗ ಅಪ್ರಮಾಣಿಕ, ಹಣ ಮಾಡುವ ಅಡ್ಡಾದ, ಮ್ಯಾನೇಜಮೆಂಟ್ ವರ್ಚಸ್ಸಿನ ಖಾಸಗಿ ಒಡೆತನದ ಶಿಸ್ತಿನ ಶಾಲೆಗಳಿಗಿಂತ ಸರಕಾರೀ ಶಾಲೆಗಳೇ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ಈ ವರ್ಷದ ಸರಕಾರಿ ಶಾಲೆಗಳ ಫಲಿತಾಂಶ ಗಮನಿಸಿದವರು ಅಲ್ಲಗಳೆಯಲಾರರು.
ಸಮಾನಶಿಕ್ಷಣ ಎಲ್ಲ ವರ್ಗದ ಮಕ್ಕಳಿಗೂ ಸಾಮಾಜಿಕ ದೃಢತೆ ನೀಡಬಲ್ಲುದಾಗಿದೆ.